ಹೊಹೆನ್‍ಜಲರನ್
ಸು. 17-18ನೆಯ ಶತಮಾನ. ಪ್ರಷ್ಯದಲ್ಲಿ ನಿರಂಕುಶ ಪ್ರಭುತ್ವ ಸ್ಥಾಪಕ. ಈ ಮನೆತನ ಪ್ರಬಲ ರಾಜ್ಯವನ್ನು ಕಟ್ಟಿ ಕೀರ್ತಿ ಪಡೆಯುವುದೆಂಬ ಮುನ್ಸೂಚನೆಯನ್ನು ವ್ಯಕ್ತಪಡಿಸಿದವರಲ್ಲಿ ಒಂದನೆಯ ಫ್ರೆಡ್ರಿಕ್ ವಿಲಿಯಮನೇ(1640) ಮೊದಲನೆಯವನು. ಇವನನ್ನು ಗ್ರೇಟ್ ಎಲೆಕ್ಟರ್ ಎಂದು ಕರೆಯುತ್ತಿದ್ದರು. ಪ್ರಷ್ಯದಲ್ಲಿ ಈತ ನಿರಂಕುಶ ಪ್ರಭುತ್ವ ಸ್ಥಾಪಿಸಿದ. ಮಗ ಒಂದನೆಯ ಫ್ರೆಡ್ರಿಕ್‍ನನ್ನು ಪ್ರಷ್ಯದ ರಾಜನೆಂದು ಘೋಷಿಸಿದ. ಈತನ ಮೊಮ್ಮಗ ಎರಡನೆಯ ಫ್ರೆಡ್ರಿಕ್ ವಿಲಿಯಮ್ ಒರಟು ಸ್ವಭಾವದವ. ತನ್ನ ಸೈನಿಕ ಬಲವನ್ನು ಹೆಚ್ಚಿಸಿ ಜಿಪುಣನಂತೆ ಜೀವಿಸಿ ಸಾಯುವ ವೇಳೆಗೆ ಹೇರಳವಾಗಿ ಹಣ ಕೂಡಿಸಿ ತನ್ನ ಮಗ ಎರಡನೆಯ ಫ್ರೆಡ್ರಿಕ್‍ನಿಗೆ ಬಿಟ್ಟು ಹೋದ. ಎರಡನೆಯ ಫ್ರೆಡ್ರಿಕ್ ಮಹಾಶಯ ಎಂಬುದಾಗಿ ಖ್ಯಾತಿ ಪಡೆದ. ಈತನ ಕಾಲದಲ್ಲಿ ಪ್ರಷ್ಯ ರಾಜ್ಯ ವಿಸ್ತರಿಸಲ್ಪಟ್ಟು ಏಳಿಗೆಗೆ ಬಂತು. ಈತ ಆಸ್ಟ್ರಿಯ ಮತ್ತು ಪೋಲೆಂಡಿನ ಸ್ವಲ್ಪ ಭಾಗವನ್ನು ಗೆದ್ದ. ಪ್ರಷ್ಯ ರಾಜ್ಯದ ಜನಸಂಖ್ಯೆಯೂ ಹೆಚ್ಚಿತು. 200,000 ಸೈನಿಕರಿದ್ದ ಪ್ರಬಲ ಸೈನ್ಯ ಸಿದ್ಧವಾಯಿತು ಹಾಗೂ ಪ್ರಪಂಚದಲ್ಲೆಲ್ಲ ಸುಸಜ್ಜಿತವಾದ ಮತ್ತು ದಕ್ಷತೆಯುಳ್ಳ ಸೈನ್ಯವೆಂದು ಹೆಸರು ಪಡೆಯಿತು. ಇಂಗ್ಲೆಂಡಿನೊಡನೆ ಸಖ್ಯ ಬೆಳಸಿ ಫ್ರೆಂಚರ ವಿರುದ್ಧ 1756-63ರ ತನಕ ಯುದ್ಧಮಾಡಿ ಜಯಗಳಿಸಿದ. ತನ್ನ ಆಳಿಕೆಯಲ್ಲಿ ಈತ ಅನೇಕ ಉಪಯುಕ್ತಕಾರ್ಯಗ ಳನ್ನು ಮಾಡಿದ. ಪೋಟ್ಸ್‍ಡಾಮ್ ಪಟ್ಟಣದಲ್ಲಿ ವಿಶಾಲ ಅರಮನೆಯನ್ನೂ ಸಾನ್‍ಸೌಸಿ ಎಂಬ ಉದ್ಯಾನವನ್ನೂ ರಾಜಮಾರ್ಗಗಳನ್ನೂ ನಿರ್ಮಿಸಿದ. ಶಿಲ್ಪಕಲೆಗೂ ಸಾಹಿತ್ಯಕ್ಕೂ ವಿಶೇಷ ಪ್ರೋತ್ಸಾಹ ಕೊಟ್ಟ. ಫ್ರೆಂಚ್ ತತ್ತ್ವಜ್ಞಾನಿ ವಾಲ್ಟೇರನಿಗೆ ಈತ ಆಶ್ರಯ ಕೊಟ್ಟಿದ್ದ. ಪ್ರಜೆಗಳಿಗೆ ಮತ ಸ್ವಾತಂತ್ರ್ಯ ನೀಡಿದ. ಕಿರುಕುಳ ಸಹಿಸಲಾರದೇ ಫ್ರಾನ್ಸಿನಿಂದ ಓಡಿಬಂದ ಪ್ರಾಟೆಸ್ಟೆಂಟರಿಗೆ ತನ್ನ ರಾಜ್ಯದಲ್ಲಿ ಆಶ್ರಯ ಕೊಟ್ಟ. 	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
								
	*